ಮುರ್ಡೇಶ್ವರ

	ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಒಂದು ಗ್ರಾಮ. ಪ್ರಕೃತಿಸೌಂದರ್ಯಕ್ಕೆ ಹೆಸರಾದದ್ದು. ಭಟ್ಕಳದ ಉತ್ತರದಲ್ಲಿ 15 ಕಿಮೀ ಹಾಗೂ ಹೊನ್ನಾವರಕ್ಕೆ 27 ಕಿಮೀ ದೂರದಲ್ಲಿದೆ. ಈ ಗ್ರಾಮದ ಮೂರು ಕಡೆ ಬತ್ತದ ಗದ್ದೆ, ತೆಂಗಿನಮರ ಹಾಗೂ ಬೆಟ್ಟಗಳ ಸಾಲು ಸುತ್ತಿದ್ದು ಪಶ್ಚಿಮದಲ್ಲಿ ಅರಬ್ಬೀ ಸಮುದ್ರತೀರರ ಸೊಬಗು ಇದೆ. ಕೃಷಿ ಮೀನುಗಾರಿಕೆ-ಇವು ಇಲ್ಲಿಯ ಮುಖ್ಯ ಉದ್ಯೋಗ.  ಮುರ್ಡೇಶ್ವರದ ರೇವು ಅತ್ಯಂತ ಸುಂದರ. ಇಲ್ಲಿಯ ಹವೆ ಆರೋಗ್ಯಕರವಾದುದು. ಬೇಸಗೆಯಲ್ಲಿ ಮಾತ್ರ ಬೆವರಿನ ಧಾರಾಪಾತ. ಸುಮಾರು 3,800 ಮಿಮೀ ಮಳೆ ಆಗುತ್ತದೆ.  ಗ್ರಾಮಸಮೀಪ ಒಂದು ಹೆಂಚಿನ ಕಾರ್ಖಾನೆ ಇದೆ. ಇಲ್ಲಿ ಯುದ್ಧಗಳು ನಡೆದ ಕುರುಹುಗಳು ಈಗಲೂ ಕಂಡುಬರುತ್ತದೆ.  ಯುದ್ಧದಲ್ಲಿ ಮಡಿದ ಯೋಧರ 30 ಸಮಾಧಿಗಳು ಇವೆ.  ಈ ಗ್ರಾಮದ ಸಮುದ್ರದಂಡೆಯ ಮೇಲೆ ಸುಂದರ ಬಸದಿಯಿದೆ. ಚೈನಮೂರ್ತಿಗಳನ್ನು ಹೋಲುವ ಪಳೆಯುಳಿಕೆಗಳೂ ಇಲಿವೆ. ವಿಜಯನಗರದ ಎರಡನೆಯ ದೇವರಾಯನ (1424-46) ಕಾಲದ ಹಾಗೂ ಇನ್ನೂ ಎರಡು ಶಿಲಾ ಶಾಸನಗಳು ಇಲ್ಲಿ ದೊರೆತಿವೆ.

	ಇಲ್ಲಿಯ ಸಮುದ್ರ ದಂಡೆಯ ಕುಂದುಗಿರಿ ಎಂಬ ಗುಡ್ಡದ ಮೇಲೆ ಮುರ್ಡೇಶ್ವರನ ಚಿಕ್ಕ ಶಿಲಾ ಗುಡಿ ಇದೆ. ಈ ಲಿಂಗ ಈಶ್ವರನ ಆತ್ಮಲಿಂಗದ ಒಂದು ಭಾಗ, ಆದ್ದರಿಂದ ಈ ಸ್ಥಳ ಪೌರಾಣಿಕಕಾಲದಿಂದ ಪ್ರಸಿದ್ಧ ಪುಣ್ಯಕ್ಷೇತ್ರವಾಗಿದೆ. ಈ ಗುಡಿ ಆದಿಚಾಲುಕ್ಯ ಶಿಲ್ಪ ಮಾದರಿಯಲ್ಲಿದೆ. ಇದನ್ನು ಪಾಂಡವರು ಕಟ್ಟಿಸಿದರು ಎಂಬ ದಂತಕತೆ ಇದೆ. 4-5ನೆಯ ಶತಮಾನದಲ್ಲಿ ಇದು ನಿರ್ಮಾಣವಾಗಿರಬೇಕೆಂದು ಪ್ರತೀತಿ. ಇಲ್ಲಿಯ ಒಂದು ಶಿಲಾಲಿಪಿಯಲ್ಲಿ ಭಟ್ಕಳದ ದೊರೆ ಭಟ್ಟಪ್ಪನಾಯಕ 14ನೆಯ ಶತಮಾನದಲ್ಲಿ ಈ ಗುಡಿಯನ್ನು ಜೀರ್ಣೋದ್ಧಾರ ಮಾಡಿದನು ಎಂದಿದೆ.

	ರಾಮಣೇಶ್ವರ ತನ್ನ ತಾಯಿಗೆ ಈಶ್ವರನ ಆತ್ಮಲಿಂಗವನ್ನು ತಂದುಕೊಡುವ ಹಾದಿಯಲ್ಲಿ ವಿನಾಯಕ ಉಪಾಯದಿಂದ ಅದನ್ನು ಭೂಸ್ಪರ್ಶ ಮಾಡಿಸಿದ.  ರಾಮಣೇಶ್ವರ ಪಾತಾಳಕ್ಕೆ ಇಳಿಯುತ್ತಿರುವ ಲಿಂಗವನ್ನು ಬಲವಾಗಿ ಹಿಡಿದು ಎಳೆದದ್ದರಿಂದ ಲಿಂಗದ ಕೊಂಚಭಾಗ ಮುರುಡಿ ಕೈಯಲ್ಲಿ ತುಂಡಾಗಿ ಬಂತು. ಮುರುಡು ಮುರುಡು ಎಂದು ರಾವಣ ಅದನ್ನು ಬಿಸಾಡಿದನಂತೆ. ಅವನು ಉಚ್ಚರಿಸಿದ ಮುರುಡು ಶಬ್ದವೇ ಮುರ್ಡೇಶ್ವರ ಎಂದಾಯಿತೆನ್ನುವರು. ಹಾಗೆ ಆತ ಎಸೆದ ತುಂಡುಗಳಲ್ಲಿ ಒಂದು ಕಾರವಾರದ ಪೂರ್ವದಿಕ್ಕಿನಲ್ಲಿ ಬಿದ್ದು ಅದಕ್ಕೆ ಸಜ್ಜೇಶ್ವರ ಎಂದೂ ಇನ್ನೊಂದು ತುಂಡು ಕುಮಟಾದ ದಕ್ಷಿಣದಿಕ್ಕಿನಲ್ಲಿ ಬಿದ್ದು ಅದು ಧಾರೇಶ್ವರ ಎಂದೂ ಮತ್ತೊಂದು ತುಣುಕು ಹೊನ್ನಾವರದ ದಕ್ಷಿಣದಿಕ್ಕಿನಲ್ಲಿ ಬಿದ್ದು ಗುಣವಂತೇಶ್ವರ ಎಂದೂ ಹೆಸರಾದುವು. ಗಣಪತಿ ಗೋಕರ್ಣದಲ್ಲಿ ಪ್ರತಿಷ್ಠಾಪಿಸಿದ ಆತ್ಮಲಿಂಗ ಮಹಾಬಲೇಶ್ವರ ಎಂಬುದಾಗಿ ಪಂಚಕ್ಷೇತ್ರಗಳಾದುವು. ಮುರ್ಡೇಶ್ವರ ದೇವಲಾಯದ ನವೀಕರಣಾಕಾರ್ಯ (1985) ಮುಗಿದಿದೆ.

	ಈ ದೇವಾಲಯದ ಆವರಣದಲ್ಲೆ ಗಣಪತಿ, ಪಾರ್ವತಿ, ದತ್ತಾತ್ರೇಯ, ಹನುಮಂತ, ನವಗ್ರಹ, ಸುಬ್ರಹ್ಮಣ್ಯ ದೇವಾಲಯಗಳೂ ಇವೆ. ವಿಶಾಲವಾದ ಈ ಕ್ಷೇತ್ರದಲ್ಲಿ ಕಾಕತೀರ್ಥ, ಭೀಮತೀರ್ಥ, ಜಟಾಯುತೀರ್ಥ, ಕುಂಭತೀರ್ಥ ಎಂಬ ತೊರೆಗಳೂ ಹರಿಯುತ್ತವೆ.  ಸ್ವಲ್ಪ ದೂರದಲ್ಲಿಯೇ ವಿಶಾಲಪುಷ್ಕರಿಣಿಯಿದೆ.  ಇಲ್ಲಿ ವರುಷಕ್ಕೆ ಎರಚು ಸಲ ತೆಪ್ಪೋತ್ಸವ ಜರುಗುತ್ತದೆ.  ಭಾರತದ ಪ್ರಸಿದ್ಧ ವೇಣುವಾದಕ ದೇವೇಂದ್ರ ಮುರ್ಡೇಶ್ವರ ಇಲ್ಲಿಯವರೆ.  ಗುಡಿಯ ಸಮೀಪವೇ ಒಂದು ಪ್ರವಾಸಿ ಬಂಗಲೆ ಇದೆ.
(ಆರ್.ಜಿ.ಆರ್.ಎ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ